ಬದುಕು ಬರಹದಲ್ಲಿ ಕರುಣೆಯ ಕೂಸಿನ ಜೀವನದ ಕಥೆ ಭಾಗ-1
ಒಂದು ಊರಲ್ಲಿ ಸುಮಾರು 1988 ರಲ್ಲಿ ಒಂದು ಬಡ ಕುಟುಂಬದಲ್ಲಿ ಒಂದು ಹೆಣ್ಣು ಮಗುವಿನ ಜನನವಾಗುತ್ತದೆ. ಅದು ಮೊದಲನೆಯ ಮಗು, ಲೋಕದ ರೂಢಿಯಂತೆ ತಾಯಿ ತವರಲ್ಲಿ ಹುಟ್ಟಿದ ಮಗು ಸಂಪ್ರದಾಯದಂತೆ ಮೂರು ಅಥವಾ ಐದು ತಿಂಗಳಿಗೆ ತಂದೆ ಮನೆಗೆ ಹೋಗೋದು ಇರುತ್ತದೆ. ಆದರೆ ಈ ಮಗುವಿನದು ಹಾಗಲ್ಲ ಯಾಕೆಂದರೆ ಆ ಮಗು ತಾಯಿ ಹೊಟ್ಟೆಯಲ್ಲಿ ಇದ್ದಾಗ ತಾಯಿಗೆ, ತಾಯಿ ತವರಿನವರು ಸೀಮಂತ ಕಾರ್ಯಕ್ರಮ ಮಾಡಿರುತ್ತಾರೆ. ಆ ವೇಳೆಯಲ್ಲಿ ತಾಯಿ ತವರಿನವರಿಗೂ ಮತ್ತೆ ತಂದೆಯ ಅಣ್ಣ ತಮ್ಮಂದಿರಿಗೂ ಜಗಳ ಆಗುತ್ತೆ. ಏಕೆಂದರೆ ಆ ಮಗುವಿನ ತಂದೆಗೆ ಐದು ಜನ ಒಡಹುಟ್ಟಿದವರು ಅದರಲ್ಲಿ ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು, ಒಬ್ಬಳು ತಂಗಿ ಹೀಗೆ ಕೂಡು ಕುಟುಂಬದಲ್ಲಿ ಒಬ್ಬ ಅಣ್ಣ ಒಬ್ಬ ತಮ್ಮ ಕುಡುಕರಾಗಿರುತ್ತಾರೆ. ಆದ ಕಾರಣ ಸೀಮಂತದ ವೇಳೆ ಆ ಮಗುವಿನ ತಂದೆ ಬೀಗರಿಗೆ ಹೇಗೆ ಮೊದಲು ಕಾಲಿಗೆ ನಮಸ್ಕಾರ ಮಾಡಿದ ಅನ್ನೊ ವಿಚಾರಕ್ಕೆ ಜಗಳವಾಗಿರುತ್ತದೆ. ಆದ ಕಾರಣ ಬಾಣಂತನಕ್ಕೆ ತವರಿಗೆ ಬಂದ ಆ ತಾಯಿ ಬಾಣಂತಿಯ ಅವಧಿ ಮೀರಿ ಅಂದರೆ ಮೂರು,ಐದು ತಿಂಗಳ ಬದಲು ಒಂಬತ್ತು ತಿಂಗಳಿಗೆ ಗಂಡನ ಮನೆಗೆ ಹೋಗುತ್ತಾಳೆ. ಆ ಮಗುವಿನ ತಂದೆ ಮಧ್ಯೆ ಮಧ್ಯೆ ಬಂದು ನೋಡಿಕೊಂಡು ಹೋಗಿರುತ್ತಾರೆ. ಆದರೆ ಕರೆದುಕೊಂಡು ಹೋಗಿರುವುದಿಲ್ಲ. ಒಂಬತ್ತು ತಿಂಗಳಿಗೆ ತಂದೆನೆ ಒಂದು ತೊಟ್ಟಿಲು ತಂದು(ತಾಯಿ ತವರಲ್ಲಿ ತೊಟ್ಟಿಲು ಕೊಡುವ ಸಂಪ್ರದಾಯ ಇಲ್ಲದ ಕಾರಣ) ಮಗಳನ್ನ ಮತ್ತು ಹೆಂಡತಿಯನ್ನ ಕರೆದೊಯ್ಯುತ್ತಾನೆ.
ಆ ಮಗು ವಾಸ್ತವದಂತೆ ತಂದೆ ಊರಲ್ಲಿ ತಂದೆ-ತಾಯಿ, ತಂದೆ ಮನೆಯವರೊಟ್ಟಿಗೆ ಮಗುವಿನ ಬಾಲ್ಯದ ಬೆಳವಣಿಗೆ ಪ್ರಾರಂಭವಾಗುತ್ತದೆ. ಮಗುವಿನ ತಂದೆ ಒಬ್ಬ ರೈತ, ಸಹಿ ಮಾಡುವಷ್ಟು ಮಾತ್ರ ವಿದ್ಯಾಭ್ಯಾಸ ಆಗಿರುತ್ತೆ; ತಾಯಿ ಅವಿದ್ಯಾವಂತೆ ಆಗಿರುತ್ತಾರೆ. ತಂದೆ ಅವರದ್ದೇ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ತಂದೆಯ ಅಣ್ಣ ತಮ್ಮಂದಿರು ಅಷ್ಟಾಗಿ ದುಡಿವವರಾಗಿರುವುದಿಲ್ಲ. ಆ ಮಗುವಿನ ತಂದೆ ಅವರ ತಂದೆ ಅಂದರೆ ಅಜ್ಜ ಅವರು ವ್ಯವಸಾಯ ಮಾಡಿಕೊಂಡು ಮನೆ ನೋಡಿಕೊಳ್ಳುತ್ತಿರುತ್ತಾರೆ. ಆ ಮಗುವಿನ ತಂದೆಗೆ ಯಾವುದೇ ದುಶ್ಚಟಗಳು ಇರುವುದಿಲ್ಲ ಕಾರಣ ಅವನ ಮಗಳನ್ನು ಮಧ್ಯಪಾನ ಮಾಡಿದ ಅಣ್ಣ ತಮ್ಮಂದಿರು ಎತ್ತಿಕೊಳ್ಳಲು ಬಂದರೆ ಮಗಳಿಗೆ ಸಾರಾಯಿ ವಾಸನೆ ಬಡಿಯುತ್ತದೆ ಮುಟ್ಟಬೇಡಿ ಅಂತಾ ಹೇಳುತ್ತಿದ್ದರಂತೆ. ಹೀಗೆ ಆ ಮಗುವಿನ ಬಾಲ್ಯ ಸಾಗುತ್ತಾ ಇರುತ್ತದೆ.
ಆ ಹೆಣ್ಣು ಮಗುವಿಗೆ ಒಂದುವರೆ ವರ್ಷದ ವೇಳೆಗೆ ಅವಳ ತಾಯಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಹೆಣ್ಣು ಮಗಳೊಟ್ಟಿಗೆ ಆಡಲು ಒಬ್ಬ ಪುಟ್ಟ ತಮ್ಮ ಬರುತ್ತಾನೆ. ಹೀಗೆ ಬಾಲ್ಯ ಸಾಗುತ್ತಿರಬೇಕಾದರೆ ಮಗುವಿಗೆ ಮೂರು ವರ್ಷ ತುಂಬುವುದರೊಳಗೆ ಆ ಮಗುವಿನ ತಂದೆಗೂ ದೊಡ್ಡಪ್ಪಂದರಿಗೂ ಜಗಳವಾಗುತ್ತದೆ. ತಂದೆಯ ತಾಯಿಯೂ (ಮಗುವಿನ ಅಜ್ಜಿ)ಸಹ ತೀರಿ ಹೋಗಿರುತ್ತಾಳೆ. ಇರೊ ಒಬ್ಬಳು ಸೊದರತ್ತೆ ಸಹ ಗಂಡನ ಮನೆ ತೊರೆದು ತವರು ಸೇರಿರುತ್ತಾಳೆ. ಹೀಗೆ ಒಡಹುಟ್ಟಿದವರೊಡನೆ ಹೊಂದಾಣಿಕೆ ಆಗದ ಕಾರಣ ಹೆಂಡತಿ ಮಕ್ಕಳೊಟ್ಟಿಗೆ ಆ ಮಗುವಿನ ತಂದೆ ಮನೆ ಆಸ್ತಿ ಎಲ್ಲವೂ ತೊರೆದು ತಾಯಿ ಮನೆಗೆ ಬರುತ್ತಾನೆ. ಅಲ್ಲಿಯೂ ಸಹ ತುಂಬಾ ದಿನ ಇರಲು ಸಾಧ್ಯವಾಗದ ಕಾರಣ ಗೂಳೆ ಹೋಗುವ ನಿರ್ಧಾರಕ್ಕೆ ಬರುತ್ತಾರೆ. ಆಗ ಆ ಹೆಣ್ಣು ಮಗುವನ್ನ ತಾಯಿ ತವರಲ್ಲಿ ಬಿಟ್ಟು ಗಂಡು ಮಗುವನ್ನ ಕರೆದುಕೊಂಡು ಆ ಮಗುವಿನ ತಂದೆ ತಾಯಿ ಗೋವಾ ರಾಜ್ಯಕ್ಕೆ ದುಡಿಯಲು ಹೋಗುತ್ತಾರೆ. ಆ ಮಗು ಅಳುತಿರತ್ತದೆ ಚಿಕ್ಕ ಮಗುವಾಗಿದ್ದರಿಂದ ತಿನ್ನಲು ಏನಾದರೂ ಕೊಟ್ಟರೆ ಸುಮನ್ನಾಗುತ್ತಿರುತ್ತದೆ. ಹೀಗೆ ಆ ಮಗುವಿಗೆ ಅಜ್ಜ ಅಜ್ಜಿನೆ ತಂದೆ ತಾಯಿ ಆಗುತ್ತಾರೆ. ಆ ಮಗು ಸಹ ಅಷ್ಟೇ ತಂದೆ ತಾಯಿನ ಮರೆತು ಅಜ್ಜ ಅಜ್ಜಿಗೆ ಅಪ್ಪ ಅವ್ವ ಅಂತಾ ಕರೆಯೋದಕ್ಕೆ ಶುರುಮಾಡತ್ತದೆ. ಅವಳಿಗೆ ಮೂರು ಜನ ಮಾವಂದಿರು ಚಿಕ್ಕಮ್ಮ ದೊಡ್ಡಮ್ಮ ಅಂತಾ ಯಾರು ಇದ್ದಿಲ್ಲ ಕಾರಣ ತಾಯಿ ಒಬ್ಬರೆ ಅವಳಿಗೆ ಮೂರು ಜನ ತಮ್ಮಂದಿರು. ಹಾಗಾಗಿ ಆ ಹೆಣ್ಣು ಮಗುವಿನ ಜೀವನ ತಂದೆ ತಾಯಿಯಂತಿರುವ ಅಜ್ಜ ಅಜ್ಜಿ ಮಾವಂದಿರೊಟ್ಟಿಗೆ ಅವಳ ಬಾಲ್ಯ ಸಾಗುತ್ತಾ ಹೋಗುತ್ತದೆ. ಜನನದಿ ಜನಕರ ಮುದ್ದಿನ ಮಗಳು ಬಾಲ್ಯದಿ ಬಂಧುಗಳ ಕರುಣೆಯ ಕೂಸಾದಳು. ಆ ಮಗುವಿನ ನಂತರದ ಜೀವನವನ್ನ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ. ಮುಂದುವರೆಯುವದು ನಿರೀಕ್ಷಿಸಿ. ಧನ್ಯವಾದಗಳು
0 Comments