ಕೋಮುವಾದ (Communalism)
ಅರ್ಥ (Meaning) :- ಕೋಮುವಾದಕ್ಕೆ ಒಂದು ನಿರ್ದಿಷ್ಟವಾದ ಅರ್ಥ ನೀಡುವುದು ಕಠಿಣ. ಕೋಮುವಾದ ಎಂಬ ಪದವು ಕಮ್ಯುನಿಟಿ ಎಂಬ ಪದದಿಂದ ಬಂದಿದೆ. ವ್ಯಕ್ತಿ ತನ್ನ ಸಮುದಾಯಕ್ಕೆ ನಿಷ್ಠೆಯನ್ನು ತೋರುವುದು ಎಂಬ ಸರಳ ಅರ್ಥವನ್ನು ನೀಡುತ್ತದೆ. ಈ ದೃಷ್ಟಿಯಿಂದ ವಿವೇಚಿಸಿದರೆ ಕೋಮುವಾದದ ಪರಿಕಲ್ಪನೆಯು ಸಕಾರಾತ್ಮಕವಾದುದು. ಆದರೆ ಸಮಕಾಲೀನ ಭಾರತದಲ್ಲಿ ಕೋಮುವಾದವು ವಿಭಿನ್ನ ರೀತಿಯ ಅರ್ಥವನ್ನು ಪಡೆದುಕೊಂಡಿದೆ. ಒಂದು ನಿರ್ದಿಷ್ಟ ಸಮುದಾಯ ಅಥವಾ ಧರ್ಮದೆಡೆಗೆ ಒಬ್ಬ ವ್ಯಕ್ತಿಗೆ ಇರುವ ಅತಿಯಾದ ವ್ಯಾಮೋಹ ಮತ್ತು ಅಂಧಶ್ರದ್ಧೆಯನ್ನು ಕೋಮುವಾದ ಎಂದು ಕರೆಯಬಹುದು.ವಿವಿಧ ಧರ್ಮೀಯರ ನಡುವೆ ಇರುವ ಸಂಶಯ ದ್ವೇಷ ಹಾಗೂ ಅಪನಂಬಿಕೆಗಳು ಕೋಮುವಾದ ಎನಿಸಿಕೊಳ್ಳುತ್ತವೆ. ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಪ್ರವೃತ್ತಿಯನ್ನು ಕೋಮುವಾದ ಎಂದು ಅರ್ಥೈಸಲಾಗುತ್ತದೆ. ರಾಜಕೀಯ ಆರ್ಥಿಕ ಸಾಮಾಜಿಕ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಧರ್ಮವನ್ನು ಬಳಸಿಕೊಳ್ಳುವುದು ಕೂಡ ಕೋಮುವಾದವಾಗುತ್ತದೆ. ಹಿಂದೂ-ಮುಸ್ಲಿಂ. ಕ್ರೈಸ್ತ ಧರ್ಮೀಯರ ನಡುವಣ ದ್ವೇಷ ,ಘರ್ಷಣೆ, ಅಸಹನೆಗಳನ್ನು ಕೋಮುವಾದ ಎಂದು ಗುರುತಿಸಲಾಗುತ್ತದೆ.
ವ್ಯಾಖೆಗಳು( Definition) :- ವಿವಿಧ ವಿದ್ವಾಂಸರು ಕೋಮುವಾದವನ್ನು ತಮ್ಮದೇ ಆದ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಡಬ್ಲ್ಯೂ ಪಿ ವೇಲ್ ಸ್ಮಿತ್. ಪ್ರತಿಯೊಂದು ಧರ್ಮವೂ ಒಂದು ಪ್ರತ್ಯೇಕ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಘಟಕ ಎಂಬ ವಿಷಯಕ್ಕೆ ಒತ್ತು ನೀಡುವ ಮತ್ತು ವಿವಿಧ ಸಮೂಹಗಳ ನಡುವೆ ಅಸ್ತಿತ್ವದಲ್ಲಿರುವ ಹಾಗೂ ವೈರುಧ್ಯಗಳಿಗೆ ಒತ್ತು ನೀಡುವ ಸಿದ್ಧಾಂತವೇ ಕೋಮುವಾದ.
ರಶೀದ್ ಉದ್ ದಿನ್ ಖಾನ್. ಧಾರ್ಮಿಕ ಶೋಷಣೆಯೇ ಕೋಮುವಾದ. ಒಂದು ಧಾರ್ಮಿಕ ಸಮುದಾಯವನ್ನು ಇತರ ಧಾರ್ಮಿಕ ಸಮುದಾಯಗಳ ವಿರುದ್ಧ ಎತ್ತಿಕಟ್ಟುವುದೇ ಕೋಮುವಾದ.
ಪ್ರಭಾ ದೀಕ್ಷಿತ್. ರಾಜಕೀಯ ಉದ್ದೇಶ ಮತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಧಾರ್ಮಿಕ-ಸಾಂಸ್ಕೃತಿಕ ಭಿನ್ನತೆಗಳನ್ನು ಬಳಸಿಕೊಳ್ಳುವ ರಾಜಕೀಯ ತತ್ವವೇ ಕೋಮುವಾದ.
ರಿಚರ್ಡ್ ಡಿ ಲ್ಯಾಂಬರ್ಟ್. ಪ್ರತಿಗಾಮಿ ಸಾಮಾಜಿಕ ಧೋರಣೆಯೇ ಕೋಮುವಾದ.
ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿ ಕೋಮುವಾದ.
ಕೋಮುವಾದವು ಭಾರತದ ಪ್ರಜಾಪ್ರಭುತ್ವವು ಇಂದು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಕೋಮುವಾದವು ಜವಾಹರ್ ಲಾಲ್ ನೆಹರುರವರು ಅಭಿಪ್ರಾಯ ಪಡುವಂತೆ ವಿದೇಶಿ ಆಕ್ರಮಣಕ್ಕಿಂತ ಅಪಾಯಕಾರಿಯಾದುದು. ಏಕೆಂದರೆ ಆಕ್ರಮಣದ ಸಂದರ್ಭದಲ್ಲಿ ರಾಷ್ಟ್ರದ ಜನತೆ ಜಾತಿ, ಮತ ,ಲಿಂಗ, ಧರ್ಮಗಳನ್ನು ಮರೆತು ಒಂದಾಗುತ್ತಾರೆ. ಇದರಿಂದ ರಾಷ್ಟ್ರೀಯ ಐಕ್ಯತೆ ಸಾಧ್ಯವಾಗುತ್ತದೆ. ಆದರೆ ಕೋಮುವಾದವೂ ಜನರನ್ನು ಜಾತಿ ಹಾಗೂ ಧರ್ಮಗಳ ಆಧಾರದ ಮೇಲೆ ವಿಭಜಿಸುತ್ತದೆ. ಹೀಗೆ ಕೋಮುವಾದವೂ ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಗಂಡಾಂತರಕಾರಿಯಾಗಿದೆ. ಆದ್ದರಿಂದ ಕೋಮುವಾದವು ಭಾರತದ ಅತ್ಯಂತ ಅಪಾಯಕಾರಿ ಕ್ಷೇತ್ರವಾಗಿದೆ. ಭಾರತವನ್ನು ಪ್ರೀತಿಸುವವರು ಕೋಮುವಾದವನ್ನು ದ್ವೇಷಿಸುತ್ತಾರೆ ಹಾಗೂ ಭಾರತವನ್ನು ದ್ವೇಷಿಸುವವರು ಕೋಮುವಾದವನ್ನು ಪ್ರೀತಿಸುತ್ತಾರೆ.
ಕೋಮುವಾದವು ಜನರನ್ನು ಧರ್ಮದ ಹೆಸರಿನಲ್ಲಿ ಬೇರ್ಪಡಿಸಿ ಧಾರ್ಮಿಕ ಸಂಘರ್ಷವನ್ನು ಉಂಟುಮಾಡುತ್ತದೆ. ಇದು ಧರ್ಮದ ಹೆಸರಿನಲ್ಲಿ ಒಂದು ರಾಷ್ಟ್ರವನ್ನು ಶತ್ರು ಪಾಳಯ ಗಳಾಗಿ ವಿಭಜಿಸುವ ಮೂಲಕ ಭಾರತದ ಜಾತ್ಯಾತೀತ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡಬಲ್ಲದು.
ಕೋಮುವಾದವು ವಿವಿಧ ಧರ್ಮಗಳ ನಡುವೆ ಘರ್ಷಣೆಯನ್ನಂಟು ಮಾಡಿ ಶಾಂತಿಯುತ ಸಹಬಾಳ್ವೆಯನ್ನು ಧ್ವಂಸಗೊಳಿಸುತ್ತದೆ. ಇದು ವಿವಿಧ ಧರ್ಮಗಳ ನಡುವಣ ಸಾಮರಸ್ಯವನ್ನು ನಾಶಗೊಳಿಸಿ ದ್ವೇಷದ ಜ್ವಾಲೆಯನ್ನು ಎಬ್ಬಿಸುತ್ತದೆ. ಕೋಮುವಾದವು ಅಮಾಯಕ ಹಾಗೂ ಮುಗ್ಧ ಜನರನ್ನು ಬಲಿ ತೆಗೆದುಕೊಳ್ಳುವದಲ್ಲದೆ ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುತ್ತದೆ. ಮುಂಬೈ ಸರಣಿ ಬಾಂಬ್ ಸ್ಪೋಟ, ಗುಜರಾತಿನ ಗೋದ್ರಾ ನರಹತ್ಯೆ, ಬಾಬ್ರಿ ಮಸೀದಿ ಪ್ರಕರಣ, ಸಿಖ್ಖರ ಹತ್ಯಾಕಾಂಡ ಪ್ರಕರಣ, ಹುಬ್ಬಳ್ಳಿಯ ಈದ್ಗಾ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಕೋಮುವಾದವು ಪ್ರಜಾಪ್ರಭುತ್ವದ ಅಡಿಗಲ್ಲಾದ ಚುನಾವಣೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಇಂದಿನ ಚುನಾವಣೆಗಳಲ್ಲಿ ಪ್ರಚಾರಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜಾತಿ ಹಾಗೂ ಕೋಮು ಸಂಘಟನೆಗಳು ರಾಜಕೀಯ ಪಕ್ಷಗಳನ್ನು ಬೆಂಬಲಿಸಿ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುತ್ತದೆ. ಭಾರತದ ಅನೇಕ ರಾಜ್ಯಗಳಲ್ಲಿ ಧರ್ಮವನ್ನು ವೋಟು ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದ ಉದಾಹರಣೆಗಳುಂಟು. ಕೋಮುವಾದವನ್ನು ಆದರಿಸಿ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಎಲ್ಲಾ ಪ್ರಜೆಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದಿಲ್ಲ. ಅದರ ಬದಲಾಗಿ ಭಾರತದ ಪ್ರಜಾಪ್ರಭುತ್ವಕ್ಕೆ ಕೋಮುವಾದದ ತೀವ್ರತೆಯನ್ನು ಹೆಚ್ಚಿಸುತ್ತಾರೆ. ಇದು ಧರ್ಮದ ಹೆಸರಿನಲ್ಲಿ ರಾಜಕಾರಣಿಗಳು ಮಾಡುವ ಶೋಷಣೆಯಾಗಿದೆ. ಕೋಮುವಾದವು ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
💧💧💧💧💧💧💧💧💧💧💧💧💧💧💧💧💧💧💧

0 Comments