Ad Code

Ticker

6/recent/ticker-posts

Click Below Image to Join Our Telegram For Latest Updates

ಬಸವಣ್ಣನವರ ವಚನಗಳು ಕನ್ನಡ ಸರಳ ವಚನಗಳು

ಬಸವಣ್ಣನವರ ವಚನಗಳು ಕನ್ನಡ ಸರಳ ವಚನಗಳು

ಬಸವಣ್ಣನವರ ವಚನಗಳು ಕನ್ನಡ ಸರಳ ವಚನಗಳು

🔰🔰🔰

ಬಸವಣ್ಣನವರ ವಚನಗಳು ಕನ್ನಡ ಸರಳ ವಚನಗಳು

01.ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,

ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.


02.ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ, 

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,

ಕೂಡಲಸಂಗಮದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.


03.ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು,

ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, 

ಸಂಗವ ಮಾಡಿದರು.

ಇವರಿಬ್ಬರಿಗೆ ಹುಟ್ಟಿದ ಮಗ ನಾನು,

ಕೂಡಲಸಂಗಮದೇವ ಸಾಕ್ಷಿಯಾಗಿ.


04.ಜನ್ಮ ಜನ್ಮಕ್ಕೆ ಹೊಗಲೀಯದೆ,

ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.

ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ

ಕೂಡಲಸಂಗಮದೇವಾ.


05.ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ

ಕೇಳಿರಯ್ಯಾ ಎರಡಾಳಿನ ಭಾಷೆಯ

ಕೊಲುವೆನೆಂಬ ಭಾಷೆ ದೇವನದು, 

ಗೆಲುವೆನೆಂಬ ಭಾಷೆ ಭಕ್ತನದು.

ಸತ್ಯವೆಂಬ ಕೂರಲಗನೆ ಕಳೆದುಕೊಂಡು

ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.

🔰🔰🔰

06.ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,

ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.

ಈ ಮಾಯೆಯ ಕಳೆವಡೆ ಎನ್ನಳವಲ್ಲ,

ನೀವೆ ಬಲ್ಲಿರಿ ಕೂಡಲಸಂಗಮದೇವಾ !


07.ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.

ಕೇಳು, ಕೂಡಲಸಂಗಮದೇವಾ,

ಮರಣವೆ ಮಹಾನವಮಿ.


08.ಜಾತಿವಿಡಿದು ಸೂತಕವನರಸುವೆ

ಜ್ಯೋತಿವಿಡಿದು ಕತ್ತಲೆಯನರಸುವೆ !

ಇದೇಕೊ ಮರುಳುಮಾನವಾ

ಜಾತಿಯಲ್ಲಿ ಅಧಿಕನೆಂಬೆ !

ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ

'ಭಕ್ತನೆ ಶಿಖಾಮಣ' ಎಂದುದು ವಚನ.

ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,

ಕೆಡಬೇಡ ಮಾನವಾ.


09.ತಂದೆ ನೀನು ತಾಯಿ ನೀನು, 

ಬಂಧು ನೀನು ಬಳಗ ನೀನು.

ನೀನಲ್ಲದೆ ಮತ್ತಾರೂ ಇಲ್ಲಯ್ಯಾ,

ಕೂಡಲಸಂಗಮದೇವಾ,

ಹಾಲಲದ್ದು, ನೀರಲದ್ದು.


10.ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,

ಕೂಡಲಸಂಗನ ಶರಣರ ಅನುಭಾವದ ಬಲದಿಂದ

ಎನ್ನ ಭವದ ಕೇಡು ನೋಡಯ್ಯಾ.

🔰🔰🔰

11.ತನುವ ಕೊಟ್ಟು ಗುರುವನೊಲಿಸಬೇಕು,

ಮನವ ಕೊಟ್ಟು ಲಿಂಗವನೊಲಿಸಬೇಕು,

ಧನವ ಕೊಟ್ಟು ಜಂಗಮವನೊಲಿಸಬೇಕು.

ಈ ತ್ರಿವಿಧವ ಹೊರಗು ಮಾಡಿ,

ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ

ಕೂಡಲಸಂಗಮದೇವ.


12.ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ

ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.

ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ

ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.

ಲಿಂಗಭಕ್ತನು ಲಿಂಗಪಥವ ಹೇಳಿದಡೆ

ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.


13.ತಾಳಮಾನ ಸರಿಸವನರಿಯೆ,

ಓಜೆ ಬಜಾವಣೆಯ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.


14.ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ

ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ

ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.


15.ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.

ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ

ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು.

ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.

ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು

ಕೂಡಲಸಂಗಮದೇವನು 'ಇತ್ತ ಬಾ‹ ಎಂದು ಎತ್ತಿಕೊಂಡನು.

🔰🔰🔰

16.ದಯವಿಲ್ಲದ ಧರ್ಮವದೇವುದಯ್ಯಾ

ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.

ದಯವೇ ಧರ್ಮದ ಮೂಲವಯ್ಯಾ,

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.


17.ದೇವನೊಬ್ಬ, ನಾಮ ಹಲವು,

ಪರಮ ಪತಿವ್ರತೆಗೆ ಗಂಡನೊಬ್ಬ.

ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.

ಹಲವು ದೈವದ ಎಂಜಲ ತಿಂಬವರನೇನೆಂಬೆ,

ಕೂಡಲಸಂಗಮದೇವಾ !


18.ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ

ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ,

 ಪೂಜಿಸಿ,ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.

ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ

ಪಂಚಮಹಾಪಾತಕ ನರಕ ಕಾಣಾ,ಕೂಡಲಸಂಗಮದೇವಾ.


19.ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ

ಈ ಲೋಕದೊಳಗೆ ಮತ್ತೆ ಅನಂತಲೋಕ

ಶಿವಲೋಕ, ಶಿವಾಚಾರವಯ್ಯಾ.

ಶಿವಭಕ್ತನಿದ್ದಠಾವೆ ದೇವಲೋಕ,

ಭಕ್ತನಂಗಳವೆ ವಾರಣಾಸಿ, ಕಾಯವೆ ಕೈಲಾಸ,

ಇದು ಸತ್ಯ, ಕೂಡಲಸಂಗಮದೇವಾ.


20.ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !

ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ

 ಮತ್ರ್ಯಲೋಕ. ಆಚಾರವೆ ಸ್ವರ್ಗ, ಅನಾಚಾರವೆ ನರಕ.

 ಕೂಡಲಸಂಗಮದೇವಾ, ನೀವೆ ಪ್ರಮಾಣು.

🔰🔰🔰

21.ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ.

ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.

ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.

ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.

ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.


22.ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,

ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,

ಮುಪ್ಪಿಂದೊಪ್ಪವಳಿಯದ ಮುನ್ನ,

ಮೃತ್ಯು ಮುಟ್ಟದ ಮುನ್ನ

ಪೂಜಿಸು ಕೂಡಲಸಂಗಮದೇವನ


23.ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,

ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.

ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,

ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು.


24.ನಾಳೆ ಬಪ್ಪುದು ನಮಗಿಂದೆ ಬರಲಿ,

ಇಂದು ಬಪ್ಪುದು ನಮಗೀಗಲೆ ಬರಲಿ,

ಇದಕಾರಂಜುವರು, ಇದಕಾರಳುಕುವರು

'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ

ನಮ್ಮ ಕೂಡಲಸಂಗಮದೇವರು ಬರೆದ ಬರೆಹವ 

ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ.


25.ನೀರ ಕಂಡಲ್ಲಿ ಮುಳುಗುವರಯ್ಯಾ,

ಮರನ ಕಂಡಲ್ಲಿ ಸುತ್ತುವರಯ್ಯಾ.

ಬತ್ತುವ ಜಲವ, ಒಣಗುವ ಮರನ

ಮಚ್ಚಿದವರು ನಿಮ್ಮನೆತ್ತ ಬಲ್ಲರು

ಕೂಡಲಸಂಗಮದೇವಾ.

🔰🔰🔰

26.ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ

ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ

ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ

ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ

ಮಹಾದಾನಿ ಕೂಡಲಸಂಗಯ್ಯನೊಲಿದು

ಮಾದಾರ ಚೆನ್ನಯ್ಯನ ಮನೆಯಲುಂಡ.

ವೇದವನೋದಿದವರು ಲಿಂಗವನೊಲಿಸಿ ತೋರಿರೋ.


27.ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ

ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.

ನುಡಿಯಲೂ ಬಾರದು, ನಡೆಯಲೂ ಬಾರದು,

ಲಿಂಗದೇವನೆ ದಿಬ್ಯವೊ ಅಯ್ಯಾ.

ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ

ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ.


28.ನುಡಿದಡೆ ಮುತ್ತಿನ ಹಾರದಂತಿರಬೇಕು.

ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.

ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.

ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.

ನುಡಿಯೊಳಗಾಗಿ ನಡೆಯದಿದ್ದಡೆ,

ಕೂಡಲಸಂಗಮದೇವನೆಂತೊಲಿವನಯ್ಯಾ


29.ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ,

ಜಲವೊಂದೆ:ಶೌಚಾಚಮನಕ್ಕೆ,

ಕುಲವೊಂದೆ:ತನ್ನ ತಾನರಿದವಂಗೆ,

ಫಲವೊಂದೆ:ಷಡುದರುಶನ ಮುಕ್ತಿಗೆ,

ನಿಲವೊಂದೆ:ಕೂಡಲಸಂಗಮದೇವಾ, ನಿಮ್ಮನರಿದವಂಗೆ.


30.ನೂರನೋದಿ ನೂರ ಕೇಳಿ ಏನು

ಆಸೆ ಬಿಡದು, ರೋಷ ಪರಿಯದು.

ಮಜ್ಜನಕ್ಕೆರೆದು ಫಲವೇನು

ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ

ನಗುವ ನಮ್ಮ ಕೂಡಲಸಂಗಮದೇವ.

🔰🔰🔰

31.ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,

ನಾಯ ಹಾಲು ನಾುಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.

ನಮ್ಮ ಕೂಡಲಸಂಗನ ಶರಣರಿಗಲ್ಲದೆ

ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.


32.ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು

ಹಗೆಯ ಕೊಲುವಡೆ, ಒಂದಲಗು ಸಾಲದೆ

ಲಿಂಗವ ಗೆಲುವಡೆ, 'ಶರಣಸತಿ ಲಿಂಗವತಿ‹ಯೆಂಬಲಗು ಸಾಲದೆ

ಎನಗೆ ನಿನಗೆ ಜಂಗಮಪ್ರಸಾದವೆಂಬ ಅಲಗು ಸಾಲದೆ

ಕೂಡಲಸಂಗಮದೇವಾ.


33.ನ್ಯಾಯನಿಷ್ಠುರಿ:ದಾಕ್ಷಿಣ್ಯಪರ ನಾನಲ್ಲ,

ಲೋಕವಿರೋಧಿ:ಶರಣನಾರಿಗಂಜುವನಲ್ಲ,

ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.


34.ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,

'ಅಯ್ಯಾ‹ ಎಂದಡೆ ಸ್ವರ್ಗ, 'ಎಲವೊ‹ ಎಂದಡೆ ನರಕ.

ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ

ಕೈಲಾಸವೈದುವುದೆ ಕೂಡಲಸಂಗಮದೇವಾ.


35.ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ,

ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,

ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ

ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,

ಕೂಡಲಸಂಗಮದೇವಾ.

🔰🔰🔰

36.ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.

ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.

ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.

ನಮ್ಮ ಕೂಡಲಸಂಗಮದೇವನಲ್ಲದೆ

ಪರದೈವಂಗಳು ಮನಕ್ಕೆ ಬಂದವೆ

ಬಿಕ್ಕನೆ ಬಿರಿವ ದೈವಂಗಳು.


37.ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,

ನಡೆಯೊಳಗೆ ನುಡಿಯ ಪೂರೈಸುವೆ.

ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.

ಒಂದು ಜವೆ ಕೊರತೆಯಾದಡೆ

ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.


38.ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,

ರುದ್ರಪದವಿಯನೊಲ್ಲೆ.ನಾನು ಮತ್ತಾವ

 ಪದವಿಯನೊಲ್ಲೆನಯ್ಯಾ.ಕೂಡಲಸಂಗಮದೇವಾ, 

ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ

 ಕರುಣಿಸಯ್ಯಾ.


39.ಭಕ್ತಿಯೆಂಬ ಪೃಥ್ವಿಯ ಮೇಲೆ, 

ಗುರುವೆಂಬಬೀಜವಂಕುರಿಸಿ,

ಲಿಂಗವೆಂಬ ಎಲೆಯಾುತ್ತು.

ಲಿಂಗವೆಂಬ ಎಲೆಯ ಮೇಲೆ

ವಿಚಾರವೆಂಬ ಹೂವಾುತ್ತು,

ಆಚಾರವೆಂಬ ಕಾಯಾುತ್ತು.

ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ

ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.


40.ಭಕ್ತಿುಲ್ಲದ ಬಡವ ನಾನಯ್ಯಾ:

ಕಕ್ಕಯ್ಯನ ಮನೆಯಲ್ಲೂ ಬೇಡಿದೆ,

ಚೆನ್ನಯ್ಯನ ಮನೆಯಲ್ಲೂ ಬೇಡಿದೆ,

ದಾಸಯ್ಯನ ಮನೆಯಲ್ಲೂ ಬೇಡಿದೆ.

ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.

🔰🔰🔰

41.ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,

ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.

ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು

ಕೂಡಲಸಂಗಮದೇವಾ.


42.ಮಡಕೆಯ ಮಾಡುವಡೆ ಮಣ್ಣೆ ಮೊದಲು,

ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,

ಶಿವಪಥವನರಿವಡೆ ಗುರುಪಥವೆ ಮೊದಲು,

ಕೂಡಲಸಂಗಮದೇವರನರಿವಡೆ

ಶರಣರ ಸಂಗವೆ ಮೊದಲು.


 43.ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,

ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ

ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ

ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ

ಇಲ್ಲ, ಕೂಡಲಸಂಗಮದೇವಾ.


44.ಮನೆ ನೋಡಾ ಬಡವರು:ಮನ ನೋಡಾ ಘನ.

ಸೋಂಕಿನಲ್ಲಿ ಶುಚಿ:ಸರ್ವಾಂಗ ಕಲಿಗಳು.

ಪಸರಕ್ಕನುವಿಲ್ಲ :ಬಂದ ತತ್‍ಕಾಲಕೆ ಉಂಟು,

ಕೂಡಲಸಂಗನ ಶರಣರು ಸ್ವತಂತ್ರಧೀರರು.


45.ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,

ಏಡಿಸಿ ಕಾಡಿತ್ತು ಶಿವನ ಡಂಗುರ,

ಮಾಡಿದೆನೆನ್ನದಿರಾ ಲಿಂಗಕ್ಕೆ, 

ಮಾಡಿದೆನೆನ್ನದಿರಾ ಜಂಗಮಕ್ಕೆ,

ಮಾಡಿದೆನೆಂಬುದು ಮನದಲಿಲದಿದ್ದಡೆ,

ಬೇಡಿತ್ತನೀವನು ಕೂಡಲಸಂಗಮದೇವ.

🔰🔰🔰

46.ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.

ಮಾಡುವ ನೀಡುವ ನಿಜಗುಣವುಳ್ಳಡೆ

ಕೂಡಿಕೊಂಬ ನಮ್ಮ ಕೂಡಲಸಂಗಮದೇವ.


47.ಮೇಲಾಗಲೊಲ್ಲೆನು ಕೀಳಾಗಲಲ್ಲದೆ,

ಕೀಳಿಂಗಲ್ಲದೆ ಹಯನು ಕರೆವುದೆ

ಮೇಲಾಗಿ ನರಕದಲೋಲಾಡಲಾರೆನು.

ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,

ಮಹಾದಾನಿ ಕೂಡಲಸಂಗಮದೇವಾ.


48.ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.

ಮಾರಿಯೆಂಬುದೇನು

ಕಂಗಳು ತಪ್ಪಿ ನೋಡಿದಡೆ ಮಾರಿ,

ನಾಲಗೆ ತಪ್ಪಿ ನುಡಿದಡೆ ಮಾರಿ,

ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ.


49.ಲಿಂಗವಶದಿಂದ ಬಂದ ನಡೆಗಳು, 

ಲಿಂಗವಶದಿಂದ ಬಂದ ನುಡಿಗಳು,

ಲಿಂಗವಂತರು ತಾವು ಅಂಜಲದೇಕೆ

ಲಿಂಗವಿರಿಸಿದಂತಿಪ್ಪುದಲ್ಲದೆ,

ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.


50.ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನ

ನಿತ್ಯಭಂಡಾರಕ್ಕೆ ಸಂದಿತ್ತಯ್ಯಾ.

ಬೆಟ್ಟಕ್ಕೆ ಬಳ್ಳು ಬಗುಳಿದಂತಾಯಿತ್ತಯ್ಯಾ.

ಕ[ರೆದು]ಕೊಳ್ಳಯ್ಯಾ, ಕ[ರೆದು]ಕೊಳ್ಳಯ್ಯಾ,

ಓ ಎನ್ನಯ್ಯಾ, ಓ ಎನ್ನಯ್ಯಾ,

ಕೂಡಲಸಂಗಮದೇವಾ.

🔰🔰🔰

51.ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.

ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ

ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ,

ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ.

ಅಯ್ಯಾ, ನಮ್ಮಯ್ಯನ ಕೈನೊಂದಿತು,

ತೆಗೆದುಕೊಡಾ ಎಲೆ ಚಂಡಾಲಗಿತ್ತಿ,

ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ

ಕೂಡಲಸಂಗಮದೇವನಲ್ಲದೆ ಆರೂ ಇಲ್ಲ


52.ತಾಳಮಾನ ಸರಿಸವನರಿಯೆ,

ಓಜೆ ಬಜಾವಣೆಯ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.


53.ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,

ಕಂಗಳಿಚ್ಛೆಗೆ ಪರವಧುವ ನೆರೆವರು.

ಲಿಂಗಲಾಂಛನಧಾರಿಯಾದಲ್ಲಿ ಫಲವೇನು

ಲಿಂಗಪಥವ ತಪ್ಪಿ ನಡೆವವರು

ಜಂಗಮಮುಖದಿಂದ ನಿಂದೆ ಬಂದಡೆ

ಕೊಂಡ ಮಾರಿಂಗೆ ಹೋಹುದು ತಪ್ಪದು

ಕೂಡಲಸಂಗಮದೇವಾ.


54.ಅಂದಣವನೇರಿದ ಸೊಣಗನಂತೆ

ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.

ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,

ಮೃಡ ನಿಮ್ಮನನುದಿನ ನೆನೆಯಲೀಯದು.

ಎನ್ನೊಡೆಯ ಕೂಡಲಸಂಗಮದೇವಾ

ನಿಮ್ಮ ಚರಣವ ನೆನೆವಂತೆ ಕರುಣಿಸು-

ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.


55.ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು,

ಬಚ್ಚ ಬರಿಯ ಮಾತನಾಡುವೆನು.

ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ. ಮೆಚ್ಚರು

 ನಿಮ್ಮವರು ಎನ್ನನು ಕೂಡಲಸಂಗಮದೇವಾ.

🔰🔰🔰

56.ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ,

ಆಳಿನಾಳು ಕೀಳಾಳು ಬಹರೆ

ಹೋಗದಿರು, ಹೋಗದಿರು, ಕೂಡಲಸಂಗಮದೇವಾ.


57.ಅಂದು ಇಂದು ಮತ್ತೊಂದೆನಬೇಡ,

ದಿನವಿಂದೇ 'ಶಿವ ಶರಣೆಂ'ಬವಂಗೆ,

ದಿನವಿಂದೇ 'ಹರ ಶರಣೆಂ'ಬವಂಗೆ,

ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.


58.ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,

ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,

ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ

 ಇರಿಸು, ಕೂಡಲಸಂಗಮದೇವಾ.


59.ಅಡವಿಯಲೊಬ್ಬ ಕಡು ನೀರಡಿಸಿ,

ಎಡೆಯಲ್ಲಿ ನೀರ ಕಂಡಂತಾುತ್ತಯ್ಯಾ.

ಕುರುಡ ಕಣ್ಣ ಪಡೆದಂತೆ,

ಬಡವ ನಿಧಾನವ ಹಡೆದಂತಾುತ್ತಯ್ಯಾ.

ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ.


60.ಅಪ್ಪನು ಡೋಹರ ಕಕ್ಕಯ್ಯನಾಗಿ,

ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ

ಮತ್ತಾ ಶ್ವಪಚಯ್ಯನ ಸನ್ನಿಧಿುಂದ

ಭಕ್ತಿಯ ಸದ್‍ಗುಣವ ನಾನು ಅರಿವೆನಯ್ಯಾ.

ಕಷ್ಟಜಾತಿ ಜನ್ಮದಲಿ ಜನಿುಸಿದೆ ಎನ್ನ,

ಎನಗಿದು ವಿಧಿಯೆ ಕೂಡಲಸಂಗಮದೇವಾ

🔰🔰🔰

61.ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು,

ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು,

ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು,

ಅನುಭಾವವಿಲ್ಲದ ಏನನೂ ಅರಿಯಬಾರದು.

ತನ್ನಲ್ಲಿ ತಾ ಸನ್ನಿಹಿತವುಳ್ಳಡೆ

ಶಿವಶರಣರ ಸಂಗವೇತಕ್ಕೆನಲುಂಟೆ

ಕೂಡಲಸಂಗಮದೇವಯ್ಯಾ,ನಿಮ್ಮ ಅನುಭಾವ

ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,

ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,

ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,

ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,

ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ


62.ಅಯ್ಯಾ, ಹಿಂದೆಯಾನು ಮಾಡಿದ ಮರಹಿಂದ ಬಂದೆನೀ ಭವದಲ್ಲಿ.ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ,

ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ,

ಆ ದಾಸೋಹವೆಂಬ ಮಹಾಗಣಸಂಕುಳದೊಳೆನ್ನನಿರಿಸಿ,

ನಿಮ್ಮ ಭಕ್ತಿಯ ಘನವ ನೀವೆ ಮೆರೆಯಲೆಂದು

ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ

 ಹೋರಿಸಿ,ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ,

ಮೂವತ್ತಾರು ಕೊಂಡೆಯವ ಗೆಲಿಸಿ,

ಎಂಬತ್ತೆಂಟು ಪವಾಡಂಗಳಂ ಕೊಂಡಾಡಿ,

ಮತ್ರ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ.

ನಿಮ್ಮ ಮಹಾಗಣಂಗಳು ಮೆಚ್ಚೆ, ಎನ್ನ ಸೂತಕವ ತೊಡೆದೆ

ಪ್ರಭುದೇವರ ಕರುಣದಿಂದ ಪ್ರಾಣಲಿಂಗಸಂಬಂಧ

 ಸಯವಾಯಿತ್ತು.ನೀವು ಕಳುಹಿದ ಬೆಸನು ಸಂದಿತ್ತು,

ಉಘೇ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ.


63.ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ

ಮಹಾನುಭಾವರ ಕಾಣಬಹುದಯ್ಯಾ.

ಮಹಾನುಭಾವರ ಸಂಗದಿಂದ

ಶ್ರೀಗುರುವನರಿಯಬಹುದು,

ಲಿಂಗವನರಿಯಬಹುದು, ಜಂಗಮವನರಿಯಬಹುದು,

ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.

ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು

ಕೂಡಲಸಂಗಮದೇವಾ, ನಿಮ್ಮ ಧರ್ಮ.


64.ಅರ್ಚಿಸಲರಿಯೆ, ಪೂಜಿಸಲರಿಯೆ,

ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.

ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.

ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,

ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,

ಕೂಡಲಸಂಗಮದೇವಾ

ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ.


65.ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.

ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.

ಒಬ್ಬ ಜಂಗಮದ ಅಭಿಮಾನದಿಂದ

ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,

ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ.

🔰🔰🔰

66.ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ

ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.

ಒಬ್ಬರಿಗಾಳಾಗಿ, ಒಬ್ಬರನೋಲೈಸುವ

ನಿರ್ಬುದ್ಧಿಮನುಜರನೇನೆಂಬೆ,

ಕೂಡಲಸಂಗಮದೇವಾ !


67.ಅಶ್ವಮೇಧಯಾಗವಂತಿರಲಿ,

ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ !

ಗಾಯತ್ರಿಯ ಜಪವಂತಿರಲಿ, ಹೋ !

ಜನಮೋಹನ ಮಂತ್ರವಂತಿರಲಿ, ಹೋ !

ಕೂಡಲಸಂಗನ ಶರಣರ ನುಡಿಗಡಣ

ಎಲ್ಲಕ್ಕಧಿಕ ನೋಡಾ.


68.ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,

ಮಾಡಿದ ಪೂಜೆಯ ನೋಡುವುದಯ್ಯಾ.

ಶಿವತತ್ವಗೀತವ ಪಾಡುವುದು,

ಶಿವನ ಮುಂದೆ ನಲಿದಾಡುವುದಯ್ಯಾ.

ಭಕ್ತಿಸಂಭಾಷಣೆಯ ಮಾಡುವುದು,

ನಮ್ಮ ಕೂಡಲಸಂಗನ ಕೂಡುವುದು.


69.ಆದ್ಯರ ವಚನ ಆದ್ಯರಿಗಾಯಿತ್ತು,

ವೇದ್ಯರಿಗಲ್ಲದೆ ಸಾಧ್ಯವಾಗದು.

ಕೂಡಲಸಂಗಮದೇವಾ

ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು


70.ಆದ್ಯರ ವಚನ ಪರುಷ ಕಂಡಣ್ಣಾ;

ಸದಾಶಿವನೆಂಬ ಲಿಂಗ[ವು] ನಂಬುವುದು,

ನಂಬಲೊಡನೆ ನೀ ವಿಜಯ ಕಂಡಣ್ಣಾ.

ಅಧರಕ್ಕೆ ಕಹಿ, ಉದರಕ್ಕೆ ಸಿಹಿ

ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.

🔰🔰🔰

71.ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ.

ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ

ಕೂಡಲಸಂಗಮದೇವಾ,

ನೀ ಸಾಕ್ಷಿಯಾಗಿ ಛೀ ಎಂಬೆನು.


72.ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು

ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,

ರಂಗವಾಲಿಯನಿಕ್ಕಿ 'ಉಘೇ, ಚಾಂಗು ಭಲಾ' ಎಂದೆಂಬೆ.

ಕೂಡಲಸಂಗನ ಶರಣರು

ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.


73.ಆವನಾದಡೇನು ಶ್ರೀಮಹಾದೇವನ ನೆನೆವನ

ಬಾಯ ತಂಬುಲವ ಮೆಲುವೆ, ಬೀಳುಡೆಯ ಹೊದೆವೆ,

ಪಾದರಕ್ಷೆಯ ಕಾಯ್ದು ಬದುಕುವೆ,

ಕೂಡಲಸಂಗಮದೇವಾ.


74.ಈರೇಳು ರತ್ನ, ಹದಿನೆಂಟು ಲಕ್ಷಗಜ,

ನಾರಿಯರು ನಾಲ್ಕು ಲಕ್ಷವು ಮೂವತ್ತೆರಡುಸಾವಿರ,

ಮಕ್ಕಳು ಹದಿನಾರು ಲಕ್ಷ,

ಅವರುಗಳೇರುವ ರಥಂಗಳು ಸೂರ್ಯನ ರಥಕ್ಕೆ

 ಸರಿಮಿಗಿಲೆನಿಸುವ ರಥಂಗಳು,

ಸಾಲದೆ, ಸಿರಿಗೆ ನೆಲೆಯೆನಿಸುವ ಅಸಂಖ್ಯಾತ ಪುರ,

ಮೂರುವರೆ ಕೋಟಿ ಬಂಧುಗಳು,

ಮೂವತ್ತೆಂಟು ಕೋಟಿ ಜಾತ್ಯಶ್ವ,

ಇಪ್ಪತ್ತೆಂಟು ಕೋಟಿ ಮೈಗಾವಲ ವೀರಭಟರು,

ಛಪ್ಪನ್ನ ದೇಶದ ರಾಯರುಗಳೆಲ್ಲರು ಕಪ್ಪಕಾಣಿಕೆಯಂ ತೆತ್ತು

 ಬಹರು.ಕೂಡಲಸಂಗಮದೇವಾ, ನಿಮ್ಮ ಕೃಪೆ ತಪ್ಪಿದಲ್ಲಿ

ಆ ಸಗರ ಕಾರ್ತವೀರ್ಯರೊಂದು ಕ್ಷಣದಲ್ಲಿ ಮಡಿದರು.


75.ಇವನಾರವ, ಇವನಾರವ, 

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ, 

ಇವ ನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.

🔰🔰🔰

76.ಉತ್ತಮ ಮಧ್ಯಮ ಕನಿಷ್ಟವೆಂದು, 

ಬಂದ ಜಂಗಮವನೆಂದೆನಾದಡೆ

ನೊಂದೆನಯ್ಯಾ, ಬೆಂದೆಯಯ್ಯಾ, 

ಎನ್ನ ಕಿಚ್ಚು ಎನ್ನ ಸುಟ್ಟಿತ್ತು.

ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ,

ಕೂಡಲಸಂಗಮದೇವಾ


77.ಉಂಬ ಬಟ್ಟಲು ಬೇರೆ ಕಂಚಲ್ಲ, 

ನೋಡುವ ದರ್ಪಣ ಬೇರೆ ಕಂಚಲ್ಲ,

ಭಾಂಡ ಒಂದೆ ಭಾಜನ ಒಂದೆ, 

ಬೆಳಗೆ ಕನ್ನಡಿಯೆನಿಸಿತ್ತಯ್ಯಾ.

ಅರಿದಡೆ ಶರಣ, ಮರೆದಡೆ ಮಾನವ,

ಮರೆಯದೆ ಪೂಜಿಸು ಕೂಡಲಸಂಗನ.


78.ಉತ್ತಮಕುಲದಲ್ಲಿ ಹುಟ್ಟಿದೆನೆಂಬ

ಕಷ್ಟತನದ ಹೊರೆಯ ಹೊರಿಸದಿರಯ್ಯಾ,

ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,

ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,

ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.

ಉನ್ನತ ಮಹಿಮ,

ಕೂಡಲಸಂಗಮದೇವಾ, ಶಿವಧೋ ಶಿವಧೋ !


79.ಉಳ್ಳವರು ಶಿವಾಲಯ ಮಾಡಿಹರು,

ನಾನೇನ ಮಾಡುವೆ ಬಡವನಯ್ಯಾ.

ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರ ಹೊನ್ನ ಕಲಶವಯ್ಯಾ.

ಕೂಡಲಸಂಗಮದೇವಾ, ಕೇಳಯ್ಯಾ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.


80.ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,

ಒರೆಯಾವಿನ ಬೆನ್ನ ಹರಿಯಲದೇಕಯ್ಯಾ

ಲಜ್ಜೆಗೆಡಲೇಕೆ ನಾಣುಗೆಡಲೇಕೆ

ಕೂಡಲಸಂಗಮದೇವನುಳ್ಳನ್ನಕ್ಕ

ಬಿಜ್ಜಳನ ಭಂಡಾರವೆನಗೇಕಯ್ಯಾ.

🔰🔰🔰

81.ಊರಿಗೆ ಹೊಸಬರು ಬಂದರೆ

ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ

ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು

ದೂಷಕರು ದೂಷಿಸದಿಪ್ಪರೇ ಅಯ್ಯ ?

ದೂಷಕರ ಧೂಮಕೇತುಗಳು ನಿಮ್ಮ ಶರಣರು,

ಕೂಡಲಸಂಗಮದೇವಾ.


 82.ಎನ್ನ ಕಾಯವ ದಂಡಿಗೆಯ ಮಾಡಯ್ಯಾ,

ಎನ್ನ ಶಿರವ ಸೋರೆಯ ಮಾಡಯ್ಯಾ,

ಎನ್ನ ನರವ ತಂತಿಯ ಮಾಡಯ್ಯಾ,

ಎನ್ನ ಬೆರಳ ಕಡ್ಡಿಯ ಮಾಡಯ್ಯಾ,

ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,

ಕೂಡಲಸಂಗಮದೇವಾ.


83.ಎನ್ನ ವಚನರಚನೆಯ ಮೆಚ್ಚ,

ಅಡಿಗಡಿಗೆನ್ನ ಮನದ ಮೈಲಿಗೆಯ ತೊಳೆದು

ಹೋದ ಪ್ರಾಣವ ಮರಳಿ ತಂದು ರಕ್ಷಿಸಿದ.

ಕೂಡಲಸಂಗಮದೇವಯ್ಯಾ,

ಮಡಿವಾಳಯ್ಯಗಳ ಕರುಣದಿಂದ

ಮರುಳುಶಂಕರದೇವರ ನಿಲವ ಕಂಡು ಬದುಕಿದೆನು

ಕಾಣಾ ಕಿನ್ನರಿ ಬ್ರಹ್ಮಯ್ಯಾ.


84.ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.

ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ,

 ಎನಗಿದೇ ದಿಬ್ಯ.


85.ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ,

 ಹೊಗಳಿ,ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ-

ಅಯ್ಯೋ, ನೊಂದೆನು, ಸೈರಿಸಲಾರೆನು !

ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ-

ಅಯ್ಯೋ ನೊಂದೆನು, ಸೈರಿಸಲಾರೆನು.

ಕೂಡಲಸಂಗಮದೇವಾ,ನೀನೆನಗೆ ಒಳ್ಳಿದನಾದಡೆ

ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ !

🔰🔰🔰

86.ಎಲ್ಲರೂ ವೀರರು, ಎಲ್ಲರೂ ಧೀರರು,

ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು.

ಕಾಳಗದ ಮುಖದಲ್ಲಿ ಕಾಣಬಾರದು,

ಓಡುವ ಮುಖದಲ್ಲಿ ಕಾಣಬಹುದು.

ನಮ್ಮ ಕೂಡಲಸಂಗನ ಶರಣರು ಧೀರರು,

ಉಳಿದವರೆಲ್ಲರೂ ಅಧಿೀರರು.


87.ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,

ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,

ಒಮ್ಮೆ ಶರಣೆನ್ನೆಲವೋ.

ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.

ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.

ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.


88.ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದಡೆ ನಿಲಲುಬಾರದು.

ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,

ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ,

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !


89.ಒಲೆಯ ಬೂದಿಯ ಬಿಲಿಯಲು ಬೇಡ,

ಒಲಿದಂತೆ ಹೂಸಿಕೊಂಡಿಪ್ಪುದು.

ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ

ಒಂದನಾಡಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ

ಕೂಡಲಸಂಗಯ್ಯ.


90.ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು

ಶ್ರೀಗಂಧದ ಸನ್ನಿಧಿಯಲು ಪರಿಮಳವಾಗವೆ

ಲಿಂಗವಂತನ ಸನ್ನಿಧಿುಂದ ಹಿಂದಣ ದುಸ್ಸಂಗವು ಕೆಡುವುದು.

ಕೂಡಲಸಂಗಮದೇವಯ್ಯಾ,

ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ

🔰🔰🔰

91.ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ

 ಹಿರಿಯರು,ಪುರಾಣದ ಹಿರಿಯರು, ವೇಷದ ಹಿರಿಯರು,

 ಭಾಷೆಯ ಹಿರಿಯರು,ಇವರೆಲ್ಲರು ತಮ್ಮ ತಮ್ಮನೆ

 ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.ತಮ್ಮ ಮರೆದು ನಿಮ್ಮ

 ಮೆರೆದಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವರು.


92.ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,

ಮೃದುವಚನವೆ ಸಕಲ ಜಪಂಗಳಯ್ಯಾ,

ಮೃದುವಚನವೆ ಸಕಲ ತಪಂಗಳಯ್ಯಾ,

ಸದುವಿನಯವೆ ಸದಾಶಿವನ ಒಲುಮೆಯಯ್ಯಾ.

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.


93.ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,

ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.

'ಸ್ಥಾವರ ಜಂಗಮ ಒಂದೆ' ಎಂದುದು ಕೂಡಲಸಂಗನ ವಚನ.


94.ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು,

ಹಾಲೊಳಗೆ ತುಪ್ಪವುಂಟು,

ಅಂತರಾಮಿಯಲ್ಲಿ ಶಿವನಿಹನು.

ಇದೇನು ಕಾರಣ ಕತ್ತಲೆ ಕಾಣಬಾರದು,

ತೋರಬಲ್ಲ ಗುರು ಸುಳಿಯನು, ಕೂಡಲಸಂಗಮದೇವಾ.


95.ಕಟ್ಟಿ ಬಿಡುವನೆ ಶರಣನು ಬಿಟ್ಟು ಹಿಡಿವನೆ ಶರಣನು

 ನಡೆದು ತಪ್ಪುವನೆ ಶರಣನು ನುಡಿದು ಹುಸಿವನೆ ಶರಣರನು

ಸಜ್ಜನಿಕೆ ತಪ್ಪಿದಡೆ, ಕೂಡಲಸಂಗಯ್ಯ ಮೂಗ ಹಲುದೋರೆ

 ಕೊಯ್ವ.

🔰🔰🔰

96.ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ,

ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು.

ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ,

ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂದೆನು.


97.ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು

ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ

ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿುಂದ ಕರಕಷ್ಟ

ಕೂಡಲಸಂಗಮದೇವಾ.


98.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.


99.ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ

ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ

ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ

ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ !

ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ

ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.


100.ಕಾಣಬಾರದ ವಸ್ತು ಕೈಗೆ ಸಾರಿತ್ತಯ್ಯಾ,

ಆನಂದದಿಂದ ಆಡುವೆ ಹಾಡುವೆನಯ್ಯಾ,

ಎನ್ನ ಕಣ್ಣ ತುಂಬಿ ನೋಡುವೆ

ಎನ್ನ ಮನವೊಲಿದು ಭಕ್ತಿಯ ಮಾಡುವೆ

ಕೂಡಲಸಂಗಯ್ಯಾ ನಿನಗೆ.

🔰🔰🔰

101.ಗಂಡ ಶಿವಲಿಂಗದೇವರ ಭಕ್ತ,

ಹೆಂಡತಿ ಮಾರಿ ಮಸಣಿಯ ಭಕ್ತೆ.

ಗಂಡ ಕೊಂಬುದು ಪಾದೋದಕ-ಪ್ರಸಾದ,

ಹೆಂಡತಿ ಕೊಂಬುದು ಸುರೆ-ಮಾಂಸ.

ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ

ಹೆಂಡದ ಮಡಿಕೆಯ ಹೊರಗೆ ತೊಳೆದಂತೆ

ಕೂಡಲಸಂಗಮದೇವಾ.


102.ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ

 ಮನೆಯಲು ಕಿಚ್ಚೆದ್ದು ಸುಡುವಾಗ

ಬಚ್ಚಲ ನೀರ, ಬೀದಿಯ ದೂಳ ಹೊಯ್ದು

ಬೊಬ್ಬಿಟ್ಟೆಲ್ಲರ ಕರೆವರಯ್ಯಾ.

ಕೂಡಲಸಂಗಮದೇವಾ,

ವಂದನೆಯ ಮರೆದು ನಿಂದಿಸುತ್ತಿದ್ದರು.


103.ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ

ಕುಲವೇನೊ ಅವದಿರ ಕುಲವೇನೊ !

ಸಕಲಜೀವಾತ್ಮರಿಗೆ ಲೇಸನೆ ಬಯಸುವ

ನಮ್ಮ ಕೂಡಲಸಂಗನ ಶರಣರೆ ಕುಲಜರು.


104.ಗುರು ಮುನಿದಡೆ ಒಂದು ದಿನ ತಾಳುವೆ,

ಲಿಂಗ ಮುನಿದಡೆ ದಿನವರೆ ತಾಳುವೆ.

ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,

ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ.


105.ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ,

ಗುರು ಚರಕೆ ವಂಚಿಸಿ,ತಾಯಿ ತಂದೆ, ಬಂಧುಬಳಗ, ಹೆಂಡತಿ,

 ಒಡಹುಟ್ಟಿದವರು ಎಂದು ಸಮಸ್ತಪದಾರ್ಥವ ಚಾಗೆಯ

 ಮಾಡುವನೊಬ್ಬ ಭಕ್ತದ್ರೋಹಿ ನೋಡಾ,

 ಕೂಡಲಸಂಗಮದೇವಾ.

🔰🔰🔰





Post a Comment

0 Comments

Social Science Quizzes For all Competitive Exams Part-117/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-1
General Science Quiz In Kannada For All Competitive Exams -71/ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ರಸಪ್ರಶ್ನೆಗಳು
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-116/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-09/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-09
8th To 10th Class Science Notes For All Competitive Exams
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
Social Science Quizzes For all Competitive Exams Part-118/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-2

Important PDF Notes

Ad Code