2022 : ಭಾರತ ಸ್ವಾತಂತ್ರ್ಯಕ್ಕೆ 75 ವರ್ಷ- ಪ್ರಬಂಧ
💥
2022 : ಭಾರತ ಸ್ವಾತಂತ್ರ್ಯಕ್ಕೆ 75 ವರ್ಷ- ಪ್ರಬಂಧ
ಭಾರತದ ಸ್ವಾತಂತ್ರ್ಯ ಅನೇಕರ ತ್ಯಾಗ ಬಲಿದಾನದ ಪ್ರತೀಕವಾಗಿದೆ . ಇಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ ಆದರೆ ಭವ್ಯ ಭಾರತವನ್ನು ಕಟ್ಟಲು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 2022ಕ್ಕೆ 75 ವರ್ಷ ತುಂಬಲಿವೆ. ಅದಕ್ಕಾಗಿ ನಮ್ಮ ದೇಶದ ಪ್ರಧಾನಮಂತ್ರಿಯವರಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮಕ್ಕೆ 12 ಮಾರ್ಚ್ 2021 ಕ್ಕೆ ಚಾಲನೆ ನೀಡಿದರು. ಸರಿಯಾಗಿ 75 ವಾರಗಳ ನಂತರ ಭಾರತದ ಸ್ವಾತಂತ್ರಕ್ಕೆ 75 ವರ್ಷಗಳ ಆಚರಣೆಗಾಗಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ 75 ವರ್ಷಗಳಲ್ಲಿ ಭಾರತ ಗಳಿಸಿದ್ದೇನು? ಉಳಿಸಿಕೊಂಡಿದ್ದೇನು? ಕಳೆದುಕೊಂಡಿದ್ದೇನು? ಎಂಬುದನ್ನು ಚರ್ಚಿಸುವ ಕಾಲ ಪಕ್ವವಾಗಿದೆ. ಶಿಕ್ಷಣ ಕ್ಷೇತ್ರ, ಮೂಲಸೌಕರ್ಯ ಕ್ಷೇತ್ರ, ಆರ್ಥಿಕ ಕ್ಷೇತ್ರ,ಸಾಮಾಜಿಕ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ರಾಜಕೀಯ ಕ್ಷೆತ್ರ, ಮುಂತಾದ ಬದಲಾವಣೆಗಳನ್ನ ಚರ್ಚಿಸುವ ಮೂಲಕ ಈ ವಿಷಯಕ್ಕೊಂದು ಸ್ಪಷ್ಟವಾದ ರೂಪ ನೀಡೋಣ.
ಶಿಕ್ಷಣ ವ್ಯವಸ್ಥೆ : ಭಾರತದ ಮೊಟ್ಟಮೊದಲ ಜನಗಣತಿ ನಡೆದದ್ದು 1872ರಲ್ಲಿ ಅಂದಿನ ಸಾಕ್ಷರತಾ ದರ 3.25% , ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1951 ರಲ್ಲಿ ಜರುಗಿದ ಜನಗಣತಿಯಲ್ಲಿನ ಅಂಕಿ ಅಂಶಗಳ ಪ್ರಕಾರ ಸಾಕ್ಷರತೆ 18. 33%, 2011ರ ಜನಗಣತಿ ಅಂಕಿ ಅಂಶಗಳ ಅಂತಿಮ ವರದಿ ಪ್ರಕಾರ73% ಸಾಕ್ಷರತಾ ದರವಾಗಿದೆ. ಇದರಿಂದ ತಿಳಿದು ಬರುವ ಅಂತಿಮ ಸತ್ಯವೆಂದರೆ ಸ್ವಾತಂತ್ರ್ಯವೇ ಸಾಕ್ಷರತೆ ದರ ಹೆಚ್ಚಳಕ್ಕೆ ಕಾರಣವಾಯಿತು. ಭಾರತ ಸರ್ಕಾರ ತನ್ನ ಸಂವಿದಾನದಲ್ಲಿ ವಿಧಿ 45 ಸೇರಿಸಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ದೇಶದಾದ್ಯಂತ ಜಾರಿಗೊಳಿಸಿತು. ಸಂವಿಧಾನಕ್ಕೆ 86ನೇ ತಿದ್ದುಪಡಿ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿತು. ಶೈಕ್ಷಣಿಕ ಕಾರ್ಯಕ್ರಮಗಳಾದ ಸರ್ವ ಶಿಕ್ಷಣ ಅಭಿಯಾನ, ಕಪ್ಪು ಹಲಗೆ ಕಾರ್ಯಕ್ರಮ, ಮಧ್ಯಾಹ್ನ ಬಿಸಿಊಟ ಕಾರ್ಯಕ್ರಮ, ಉಚಿತ ಬೈಸಿಕಲ್ ವಿತರಣೆ, ವಯಸ್ಕ ಶಿಕ್ಷಣ, ಹೊಸ ಶಿಕ್ಷಣ ನೀತಿ ಈ ಎಲ್ಲಾ ಕಾರ್ಯಕ್ರಮಗಳ ಫಲದಿಂದ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅಪಾರವಾದ ಬದಲಾವಣೆ ಕಾಣಿಸಿತು. ಇದಕ್ಕೆ ಕಾರಣವೇ ಭಾರತದ ಸ್ವಾತಂತ್ರ್ಯ .
ಮೂಲಸೌಕರ್ಯ ಕ್ಷೇತ್ರ : ಕುಡಿಯುವ ನೀರು, ತಿನ್ನಲು ಆಹಾರ, ವಾಸಿಸಲು ಮನೆ ಇವು ಅವಶ್ಯಕ ಮೂಲ ಸೌಕರ್ಯಗಳಾಗಿವೆ. ಇದರ ಜೊತೆಗೆ ರಸ್ತೆ,ವಿದ್ಯುತ್, ಅರೋಗ್ಯ, ಶುಚಿತ್ವ ಅಗತ್ಯ ಮೂಲಸೌಕರ್ಯಗಳಾಗಿವೆ. ಇಂದು ಭಾರತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ಸಾರ್ವಜನಿಕ ವಿತರಣಾವ್ಯವಸ್ಥೆ ಮೂಲಕ, ಆಹಾರ ಭದ್ರತಾ ಕಾಯ್ದೆ ಮೂಲಕ ಹಸಿವಿನಿಂದ ಯಾರು ಇರಬಾರದೆಂದು ಘೋಷಣೆಯನ್ನು ಸರ್ಕಾರ ಮಾಡಿದೆ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 75% ಕಿಂತ ಹೆಚ್ಚು ಜನರು ಗುಡಿಸಲು ವಾಸಿಗಳಾಗಿದ್ದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಂತಹ ಹಲವು ಯೋಜನೆಗಳ ಮೂಲಕ ದೇಶ ಗುಡಿಸಲು ಮುಕ್ತವಾಗಿದೆ.
ಮನೆಮನೆಗೂ ಸಂಪರ್ಕ ಕಲ್ಪಿಸುವ ನಮ್ಮ ಗ್ರಾಮ ನಮ್ಮ ರಸ್ತೆ, ಪ್ರತಿ ಮನೆಗೂ ವಿದ್ಯುತ್ ನ್ನು ಸರ್ಕಾರ ಇಂದು ಕಲ್ಪಿಸಿದೆ. ಭಾಗ್ಯಜ್ಯೋತಿ ಕಾರ್ಯಕ್ರಮದಿಂದ ಬಡವರಿಗೆ ವಿದ್ಯುತ್ ಉಚಿತವಾಗಿದೆ. ಕೃಷಿ ಬಳಕೆಯ ವಿದ್ಯುತ್ ಕೂಡ ಉಚಿತವಾಗಿ ನೀಡಲಾಗುತ್ತಿದೆ. ಹಿಂದೆ ಪ್ಲೇಗ್,ಕಲಾರದಂತಹ ರೋಗಗಳು ಬಂದರೆ ಇಡೀ ಊರಿಗೆ ಊರೇ ಖಾಲಿಯಾಗುತಿತ್ತು. ಇಂದು ಊರಿಗೊಂದು ಪ್ರಾಥಮಿಕ ಅರೋಗ್ಯ ಕೇಂದ್ರ, ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗನ್ನು ತೆರೆದು ಬಡವರಿಗೆ ಉಚಿತವಾಗಿ ಅರೋಗ್ಯ ಸೌಲಭ್ಯ ಒದಗಿಸುತ್ತಿದೆ. ಮನೆಗೊಂದು ಸೌಚಾಲಯ ನಿರ್ಮಿಸಿ ಸ್ವಚ್ಛ ಭಾರತ ಅಭಿಯಾನ ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಿದೆ. ಇದೆಕ್ಕೆಲ್ಲ ಮೂಲ ಕಾರಣ ಭಾರತದ ೭೫ ವರ್ಷಗಳ ಸ್ವಾತಂತ್ರ್ಯ.
💥
ಆರ್ಥಿಕ ಕ್ಷೇತ್ರ : 1949-50ರಲ್ಲಿ ಭಾರತದ ಬಜೆಟ್ ವ್ಯಾಪ್ತಿ ರೂ. 323ಕೋಟಿ, 2021-22ನೇ ಸಾಲಿನ ಬಜೆಟ್ ವ್ಯಾಪ್ತಿ ರೂ. 32,84,000 ಕೋಟಿ ಅಂದರೆ 9900 ಪಟ್ಟು ಬಜೆಟ್ ವ್ಯಾಪ್ತಿ ಹೆಚ್ಚಾಗಿದೆ. ಕೇವಲ 75 ವರ್ಷಗಳಲ್ಲಿ ಭಾರತ ಜಗತ್ತಿನ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.
1969 & 1980 ರಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಜರುಗಿದ ಬ್ಯಾಂಕುಗಳ ರಾಷ್ಟ್ರೀಕರಣ ಆರ್ಥಿಕ ಸಮಾನತೆಯ ಸಾಧನವಾದವು. ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗುವಂತಾಯಿತು. 1991 ರಲ್ಲಿ ಪಿ. ವಿ. ನರಸಿಂಹರಾವ್ & ಮನಮೋಹನಸಿಂಗ್ ಜೋಡಿ ಎಲ್.ಪಿ. ಜಿ. ಜಾರಿ ಮಾಡುವ ಮೂಲಕ ಭಾರತದ ಮಾರುಕಟ್ಟೆ ಜಗತ್ತಿಗೆ ತೆರೆದಿಡುವಂತೆ ಮಾಡಿದರು.
ಆಧುನಿಕ ಸಂಪರ್ಕ ಕ್ರಾಂತಿಯ ಫಲವಾಗಿ ಬ್ಯಾಂಕಿಂಗ್ ಸೌಲಭ್ಯಗಳು ಮನೆ ಮನೆಯನ್ನು ತಲುಪಿವೆ. ಹಣ ಕಳಿಸುವ ಮತ್ತು ಸ್ವೀಕರಿಸುವ ವ್ಯವಸ್ಥೆ ತುಂಬಾ ಸರಳೀಕರಣವಾಗಿದೆ. 2017ರಲ್ಲಿ ಜಾರಿ ಬಂದ ಜಿ.ಎಸ್.ಟಿ ಪ್ರತಿ ತಿಂಗಳು ರೂ. 1,೦೦,೦೦೦ ಕೋಟಿ ತೆರಿಗೆ ಸಂಗ್ರಹಣೆ ಮಾಡುತ್ತಿದೆ. ಭಾರತದ ಷೇರುಮಾರುಕಟ್ಟೆ ಸೆನ್ಸೆನ್ ಇಂದು 5೦,೦೦೦ ದಾಟಿದೆ. ಜಗತ್ತಿನ ಶ್ರೀಮಂತರಲ್ಲಿ ಭಾರತ ತನ್ನದೇ ಪಾಲು ಪಡೆದಿದೆ. ಇಷ್ಟೆಲ್ಲ ಆರ್ಥಿಕ ಸಾಧನೆಗೆ ಕಾರಣ ಭಾರತದ ಸ್ವಾತಂತ್ರ್ಯದ 75 ವರ್ಷಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ : " ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಬೆಳವಣಿಗೆಗೆ ಮತ್ತು ವಿಕಾಸಕ್ಕೆ ರಾಮಬಾಣ " ಭಾರತ ಸ್ವಾತಂತ್ರ್ಯ ಪಡೆದಾಗ ಯಾವುದೇ ಬಾಹ್ಯಾಕಾಶ ಮತ್ತು ರಕ್ಷಣಾ ಸಂಶೋಧನಾ ಕೇಂದ್ರಗಳು ಇಅರಲಿಲ್ಲ. 1969 ರಲ್ಲಿ ಇಸ್ರೋ ಮತ್ತು ಡಿ.ಆರ್.ಡಿ.ಓ ಸ್ಥಾಪನೆ ಮಾಡುವ ಮೂಲಕ ಇಂದು ನಾವು ಚಂದ್ರಯಾನ, ಮಂಗಳಯಾನ, ನಮ್ಮದೇ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದ್ದೇವೆ.
ಡಿ ಆರ್ ಡಿ ಓನ ಮೂಲಕ ಕ್ಷಿಪಣಿಗಳನ್ನು,ಯುದ್ಧವಿಮಾನಗಳು,ಸಬ್ ಮರಿನ್ ಗಳು, ಜಲಾಂತರಗಾಮಿಗಳು, ಕ್ಷಿಪಣಿ ನಿರೋಧಕಗಳನ್ನು ತಯಾರಿಸುತ್ತಿದ್ದೇವೆ. ನಮ್ಮ ದೇಶದ ರಕ್ಷಣೆಗೆ ಬೇಕಿರುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು ಸಭಲರಾಗಿದ್ದೇವೆ. ಕಾರಣ ಸ್ವಾತಂತ್ರ್ಯದ ೭೫ ವರ್ಷಗಳು.
ಸಾಮಾಜಿಕ ಕ್ಷೇತ್ರ : ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸಾಕಷ್ಟು ಸಾಮಾಜಿಕ ಪಿಡುಗುಗಳು ಇದ್ದವು. ದೇವದಾಸಿ ಪದ್ಧತಿ,ಬಾಲ್ಯವಿವಾಹ , ಸತಿ ತ್ರಿವಳಿ ತಲಾಕ್ , ಇವುಗಳ ನಿಷೇದಕ್ಕೆ ಪ್ರಬಲವಾದ ಕಾಯ್ದೆ ಜಾರಿಗೆ ತರಲಾಯಿತು. ಅನೇಕ ಸಾಮಾಜಿಕ ಸುಧಾರಣೆ ಮಾಡಲಾಯಿತು. ಸಂವಿಧಾನದ ವಿಧಿ 14ರಲ್ಲಿ ಸಮಾನತೆ, 17ರಲ್ಲಿ ಅಸ್ಪೃಶ್ಯತೆ ನಿವಾರಣೆ ಇವುಗಳಿಂದ ದೇಶದ ಎಲ್ಲರೂ ಮುಖ್ಯವಾಹಿನಿಗೆ ಬರಲು ಸಹಾಯವಾಗಿದ್ದಕ್ಕೆ ಕಾರಣ ಭಾರತ ಸ್ವಾತಂತ್ರ್ಯ.
💥
ರಾಜಕೀಯ ಕ್ಷೇತ್ರ : 1950 ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ಪ್ರತಿಷ್ಠಾಪನೆಯಾಯಿತು. ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಬಡವರು, ಅಸ್ಪೃಶರು, ಮಹಿಳೆಯರು, ಅಲ್ಪಸಂಖ್ಯಾತರು ಚುನಾವಣೆ ಎದುರಿಸಿ ಪ್ರಜೆಗಳೇ ಪ್ರಭುಗಳಾಗಿದ್ದರೆ. ಮನೆ ಮನೆಗೆ ದಿನಪತ್ರಿಕೆ ಮಾರಾಟ ಮಾಡುತಿದ್ದ ಅಬ್ದುಲ್ ಕಲಾಂ ಜೀ ದೇಶಕ್ಕೆ ರಾಷ್ಟ್ರಪತಿಯಾದರು, ಚಿಮಣಿ ದೀಪದಲ್ಲಿ ಅಧ್ಯಯನ ಮಾಡಿದ ಮನಮೋಹನಸಿಂಗ್ 10 ವರ್ಷ ದೇಶಕ್ಕೆ ಪ್ರಧಾನಿಯಾದರು,ರೈಲು ನಿಲ್ದಾಣದಲ್ಲಿ ಚಹಾ ಮಾರುತಿದ್ದ ಬಾಲಕ ಇಂದಿನ ಪ್ರಧಾನಿಯಾಗಿದ್ದರೆ, ಅಷ್ಟೇ ಅಲ್ಲದೆ ಆದಿವಾಸಿ ಜನಾಂಗದ ದ್ರೌಪದಿ ಮುರ್ಮು ರವರು ಇಂದಿನ ರಾಷ್ಟ್ರಪತಿಯಾಗಿದ್ದರೆ. ಈ ಸಾಧನೆಗೆ ಕಾರಣ ದೇಶದ ಸ್ವಾತಂತ್ರ್ಯ .
ಉಪಸಂಹಾರ : ಸ್ವಾತಂತ್ರ್ಯದ ನಂತರ ಎಷ್ಟು ಸುಧಾರಣೆ ಕಂಡಿದೆಯೋ ಅಷ್ಟೊಂದು ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. ಜನಸಂಖ್ಯಾಸ್ಫೋಟ,ನಿರುದ್ಯೋಗ,ಬಡತನ, ಮುಖ್ಯವಾಗಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಿವೃತ್ತ ಲೋಕಾಯುಕ್ತರು ಹೇಳಿದಂತೆ ಈ ದೇಶ ಹಾಳಾಗುತ್ತಿರುವುದು ಅನಕ್ಷರಸ್ತರಿಂದಲ್ಲ ಸುಶಿಕ್ಷಿತರಿಂದ ಎಂಬುದು ತುಂಬಾ ಮಾರ್ಮಿಕವಾಗಿದೆ. ಪ್ರತಿಯೊಬ್ಬ ಪ್ರಜೆ ಇಂದು ತನ್ನ ಜವಾಬ್ದಾರಿಯನ್ನ ಅರಿಯಬೇಕಿದೆ. ಚುನಾವಣೆ ಜರುಗಿದಾಗ ತನ್ನ ಓಟಿನ ಅಧಿಕಾರವನ್ನು ಮಾರಿಕೊಳ್ಳದೆ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ. ಯಾವುದಾದರು ಇರಲಿ ಒಂದು ಕೆಲಸವನ್ನು ಸೃಷ್ಟಿಸಿಕೊಂಡು ಸ್ವಯಂ ಬಲದಮೇಲೆ ಜೀವನ ಕಟ್ಟಿಕೊಳ್ಳಬೇಕಿದೆ. ಎಷ್ಟೇ ಸಮಸ್ಯೆಗಳ ಮಧ್ಯಯು ಮುನ್ನಡೆಯಬೇಕಿದೆ ಯಾರಿಗೂ ಜಗ್ಗದೆ ,ಕುಗ್ಗದೆ ನಡೆಯಬೇಕಿದೆ. ಅದನ್ನು ಕವಿ ಕುವೆಂಪು ರವರು ತುಂಬಾ ಚನ್ನಾಗಿ ಹೇಳಿದ್ದಾರೆ.
ನಡೆ ಮುಂದೆ ,ನಡೆ ಮುಂದೆ;
ನುಗ್ಗಿ ನಡೆ ಮುಂದೆ !
ಜಗ್ಗದೆಯೆ ಕುಗ್ಗದೆಯೆ ;
ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ l
ನನ್ನ ಹಿತ ಎಂದು ll
ಭಾರತ ಮಾತೆಯ ಮತವೇ l
ನನ್ನ ಮತ ಎಂದು ll
ಭಾರತಾಂಬೆಯ ಸುತರೆ ಸೋದರರು ಎಂದು l
ಭಾರತಾಂಬೆಯ ಮುಕ್ತಿ ಮುಕ್ತಿ ನನಗೆಂದು ll
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥

0 Comments